ಮರ್ಫಿ, ವಿಲಿಯಮ್ ಪ್ಯಾರಿ  
1892. ಅಮೆರಿಕದ ವೈದ್ಯ. ಮಾರಕ ರಕ್ತಕಣ ಕೊರತೆ (ಪರ್ನಿಶಿಯಸ್ ಅನಿಮಿಯ) ಎಂಬ,  ಮಾರಕವಾಗಿದ್ದ ವ್ಯಾಧಿಗೆ ಚಿಕಿತ್ಸಕವನ್ನು ಆವಿಷ್ಕರಿಸಿದ್ದಕ್ಕಾಗಿ ಮೈನಾಟ್ ಮತ್ತು ವ್ಹಿಪ್ಪಲ್ ಎಂಬ ವಿಜ್ಞಾನಿಗಳೊಡನೆ ಒಟ್ಟಾಗಿ 1934ರ ನೊಬೆಲ್ ಪಾರಿತೋಷಿಕ ಪಡೆದಾತ. ವಿಸ್ಕಾನ್ಸಿನ್ ಪ್ರಾಂತ್ಯದ ಸ್ಟಫ್‍ಟನ್ ಎಂಬಲ್ಲಿ 1892 ಫೆಬ್ರುವರಿ 6ರಂದು ಜನನ. ಓರಿಗನ್ ವಿಶ್ವವಿದ್ಯಾಲಯದ ಎ.ಬಿ. ಡಿಗ್ರಿಯನ್ನು 1914ರಲ್ಲಿ  ಪಡೆದ ಮೇಲೆ ಎರಡು ವರ್ಷ ಓರಿಗನ್ ಪ್ರೌಢಶಾಲೆಯಲ್ಲಿ ಭೌತವಿಜ್ಞಾನ ಹಾಗೂ ಗಣಿತ ಅಧ್ಯಾಪಕನಾಗಿದ್ದ. ಅನಂತರ ವೈದ್ಯ ವ್ಯಾಸಂಗಮಾಡಿ ಅದರಲ್ಲಿ ಪದವಿ ಪಡೆದು ರ್ಹೋಡ್ ಐಲೆಂಡ್ ಪ್ರಾಂತ್ಯದ ಪ್ರಾವಿಡೆನ್ಸ್ ನಗರ ಆಸ್ಪತ್ರೆಯಲ್ಲಿ ಕಿರಿವೈದ್ಯನಾಗಿ ಕೆಲಸಮಾಡಿ ಅನುಭವ ಗಳಿಸಿದ. 1923ರಲ್ಲಿ ಬಾಸ್ಟನ್ನಿಗೆ ಬಂದು ಅಲ್ಲಿಯ ಪೀಟರ್ ಬ್ರೇಂಟ್ ಬ್ರಿಂಗ್ಹಾಮ್ ಆಸ್ಪತ್ರೆಯಲ್ಲಿ ಪುನಃ ಕಿರಿವೈದ್ಯನಾಗಿ ಕೆಲಸಕ್ಕೆ ಸೇರಿ ಬಡ್ತಿ ಪಡೆದು ರಕ್ತರೋಗತಜ್ಞನಾಗಿ (ಹಿಮಾಟಾಲಜಿಸ್ಟ್) ನೇಮಿತನಾದ. ಜೊತೆಯಲ್ಲಿ ಹಾರ್ವರ್ಡ್ ವೈದ್ಯವಿಭಾಗದಲ್ಲಿ ಅಧ್ಯಾಪಕನಾಗಿಯೂ ಇದ್ದ. ಬಾಸ್ಟನ್ನಿನ ಇನ್ನೊಬ್ಬ ವೈದ್ಯ ಮೈನಾಟನೊಡನೆ ರಕ್ತಕಣಕೊರತೆಗೆ ಚಿಕಿತ್ಸಕವನ್ನು ಆವಿಷ್ಕರಿಸಿದ.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ